ನೀವು ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ಭೇಟಿ ನೀಡಬಹುದಾದ ಪಾರ್ಕ್ ಗಳು
ನಮ್ಮ ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯುತ್ತಾರೆ . ಇದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ನಿಮಗೆ ಗೊತ್ತೇ? ಬೆಂಗಳೂರನ್ನು ಭಾರತದ ಉದ್ಯಾನವನಗಳ ನಗರ ಎಂತಲೂ ಕರೆಯುತ್ತಾರೆ. ಹೌದು. ಬೆಂಗಳೂರು ಹೆಚ್ಚು ಹಸಿರುಮಯ ಪ್ರದೇಶ ಹೊಂದಿದ್ದು, ಇಲ್ಲಿ ಹಲವಾರು ಉದ್ಯಾನವನಗಳಿವೆ. ಈ ಉದ್ಯಾನವನಗಳು ತಮ್ಮ ಪ್ರಾಕೃತಿಕ ಸೌಂದರ್ಯ ಮತ್ತು ವೈವಿಧ್ಯಮಯ ಚಟುವಟಿಕೆಗಳಿಂದ ಸ್ಥಳೀಯರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಕೆಲವು ಉದ್ಯಾನವನಗಳಲ್ಲಿ ನಡೆಯುವ ವಿವಿಧ ಸಾಮಾಜಿಕ ಕಾರ್ಯಕ್ರಮಗಳಲ್ಲಿಯೂ ಸಹ ನೀವು ಭಾಗವಹಿಸಬಹುದು. ಕೆಳಗೆ ನೀವು ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ಭೇಟಿ ನೀಡಬಹುದಾದ ಪಾರ್ಕ್ ಗಳ ಪಟ್ಟಿಯನ್ನು ನೀಡಲಾಗಿದೆ.
ಲಾಲ್ ಬಾಗ್ ಸಸ್ಯೋದ್ಯಾನ
ಲಾಲ್ ಬಾಗ್ ಬೊಟಾನಿಕಲ್ ಗಾರ್ಡನ್ ಲಾಲ್ ಭಾಗ್ ಎಂದೇ ಹೆಚ್ಚು ಪ್ರಸಿದ್ಧಿ. ಇಲ್ಲಿನ ಹಚ್ಚ ಹಸಿರು ಮತ್ತು ಆಹ್ಲಾದಕರ
ವಾತಾವರಣವು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಸೂಕ್ತವಾಗಿದೆ. ನಗರದಲ್ಲಿರುವ ಅತ್ಯುತ್ತಮ ಉದ್ಯಾನವನಗಳಲ್ಲಿ ಒಂದಾಗಿರುವ ಲಾಲ್ ಭಾಗ ವಿವಿಧ ಮೂಲಗಳಿಂದ ಸಸ್ಯಗಳ ವೈವಿಧ್ಯಮಯ ಸಂಗ್ರಹವನ್ನು ಹೊಂದಿದೆ. ಗಾಜಿನಮನೆ ಈ ಉದ್ಯಾನದ ಪ್ರಮುಖ ಆಕರ್ಷಣೆಯಾಗಿದ್ದು, ಇದು ಸ್ಥಳೀಯರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅಷ್ಟೇ ಅಲ್ಲ ! ಪ್ರತಿ ಜನವರಿ ಮತ್ತು ಆಗಸ್ಟನಲ್ಲಿ ಇಲ್ಲಿ ವಾರ್ಷಿಕ ಪುಷ್ಪ ಪ್ರದರ್ಶನಗಳನ್ನು ಆಯೋಜಿಸಲಾಗುತ್ತದೆ.ಇದು ಈ ಲಾಲ್ ಭಾಗ್ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಕಬ್ಬನ್ ಪಾರ್ಕ್:
ನಾವು ಬೆಂಗಳೂರಿನಲ್ಲಿರುವ ಪಾರ್ಕ್ ಗಳ ಮಾತನಾಡುವಾಗ ನಮಗೆ ಮೊದಲು ನೆನೆಪಿಗೆ ಬರುವುದೇ ಕಬ್ಬನ್ ಪಾರ್ಕ್. ಈ ಕಬ್ಬನ್ ಪಾರ್ಕ್ ಬೆಂಗಳೂರಿನ ಅತ್ಯುತ್ತಮ ಉದ್ಯಾನವನಗಳಲ್ಲಿ ಒಂದು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. 300 ಎಕರೆ ಪ್ರದೇಶದಲ್ಲಿ ಆವರಿಸಿರುವ ಈ ಪ್ರದೇಶವು ಪ್ರಕೃತಿ ಪ್ರಿಯರಿಗೆ ಸೂಕ್ತ ಸ್ಥಳವಾಗಿದೆ. ಮಕ್ಕಳಿಗಾಗಿ ಇಲ್ಲಿ ಮಿನಿ ಅಮ್ಯೂಸ್ಮೆಂಟ್ ಪಾರ್ಕ್ , ಜವಾಹರ್ ಬಾಲ ಭವನಗಳಿವೆ. ಇಲ್ಲಿ ಮಕ್ಕಳು ಆಟಗಳನ್ನು ಆಡಬಹುದು ಮತ್ತು ಪ್ರಸಿದ್ಧ ಪುಟಾಣಿ ಎಕ್ಸಪ್ರೆಸ್ ಆಟಿಕೆ ರೈಲ್ ಇಲ್ಲಿನ ಪ್ರಮುಖ ಆಕರ್ಷಣೆ. ಈ ಪುಟಾಣಿ ರೈಲ್ ಕಂಡರೇ ಮಕ್ಕಳಿಗೆ ಖುಷಿಯೋ ಖುಷಿ. ಹಾಗೆಯೇ, ಭಾರತದ ಎರಡನೇ ಅತಿದೊಡ್ಡ ಅಕ್ವೇರಿಯಂ ಆಗಿರುವ ಬೆಂಗಳೂರು ಅಕ್ವೇರಿಯಂ ಕೂಡ ಈ ಪಾರ್ಕ್ ಕಾಂಪ್ಲೆಕ್ಸ್ ನಲ್ಲಿದೆ.
ಚಿಟ್ಟೆ ಪಾರ್ಕ್:
ಬೆಂಗಳೂರಿನಲ್ಲಿರುವ ಚಿಟ್ಟೆ ಪಾರ್ಕ್ ನೋಡಲು ಆಕರ್ಷಕವಾಗಿದ್ದು ನಿಮಗೆ ಸ್ವಪ್ನಲೋಕಕ್ಕೆ ಬಂದಂತಾಗುತ್ತದೆ. ನೀವು ಈ ಉದ್ಯಾನವನ್ನು ಪ್ರವೇಶಿಸಿದ ತಕ್ಷಣ ನಿಮಗೆ ಬೇರೆ ಲೋಕಕ್ಕೆ ಬಂದಿದ್ದೇವೆ ಎಂದೆನಿಸಿದರೇ ಆಶ್ಚರ್ಯವೇನಿಲ್ಲ. ಇಲ್ಲಿ ನೀವು 70 ಕ್ಕೂ ಹೆಚ್ಚು ಜಾತಿಯ ಚಿಟ್ಟೆಗಳು ನಿಮ್ಮ ಸುತ್ತಲೂ ಹಾರುವುದನ್ನು ನೀವು ನೋಡುತ್ತೀರಿ. ಬನ್ನೇರುಘಟ್ಟ ಜೈವಿಕ ಉದ್ಯಾನವನದೊಳಗೆ ಇರುವ ಈ ಉದ್ಯಾನವನವು ಹಲವು ಜಲಮೂಲಗಳನ್ನು ಹೊಂದಿದೆ. ಕೆಲವರು ನೆಮ್ಮದಿಗಾಗಿ ಈ ಚಿಟ್ಟೆ ಪಾರ್ಕ್ ಗೆ ಭೇಟಿ ನೀಡಿದರೇ ಇನ್ನೂ ಕೆಲವರು ತಮ್ಮ ರಜೆಯನ್ನು ಮಜವಾಗಿ ಕಳೆಯಲು ಇಲ್ಲಿ ತಮ್ಮ ಪ್ರೀತಿಪಾತ್ರರೊಡನೆ ಭೇಟಿ ನೀಡುತ್ತಾರೆ. ತಮ್ಮ ಕುಟುಂಬದವರೊಡನೆ ಗುಣಮಟ್ಟದ ಸಮಯವನ್ನು ಕಳೆಯಲು ಬಯಸುವವರಿಗೆ ಇದು ಸೂಕ್ತವಾದ ಸ್ಥಳವಾಗಿದೆ.
ಬಗಲ್ ರಾಕ್ ಪಾರ್ಕ್ :
ಬೆಂಗಳೂರಿನ ಬಗಲ್ ರಾಕ್ ಪಾರ್ಕ್ ಕುರಿತು ಯಾರಿಗೆ ತಾನೇ ತಿಳಿದಿಲ್ಲ. ಇತಿಹಾಸ ಮತ್ತು ಸಾಕಷ್ಟು ಹಸಿರನ್ನು ತನ್ನಲ್ಲಿ
ಮೇಳೈಸಿಕೊಂಡಿರುವ ಈ ಪಾರ್ಕ್ ಬೆಂಗಳೂರಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ನೈಸರ್ಗಿಕ ಶಿಲಾರಚನೆಗಳ ನಡುವೆ ನಿರ್ಮಿಸಲಾಗಿರುವ್ ಈ ಪಾರ್ಕ್ ಪ್ರವಾಸಿಗರನ್ನು ಆಕರ್ಷಿಸುವ ಹಲವಾರು ಅಂಶಗಳನ್ನು ಹೊಂದಿದೆ. ಇದು ಬೆರಗುಗೊಳಿಸುವ ಜಲಪಾತಗಳು, ಕಾರಂಜಿಗಳು ಮತ್ತು ಮೂರು ದೇವಸ್ಥಾನಗಳನ್ನು ಹೊಂದಿದ್ದು ಇದು ಕುಟುಂಬಗಳ ನೆಚ್ಚಿನ ಪಿಕ್ನಿಕ್ ತಾಣವಾಗಿದೆ. ಇಲ್ಲಿ ಹೊರಾಂಗಣ ಜಿಮ್ ಮತ್ತು ಜಾಗಿಂಗ್ ಟ್ರ್ಯಾಕ್ ಸಹ ಇದೆ. ಕೆಲವೊಮ್ಮೆ ಇಲ್ಲಿ ಸಂಗೀತ ಪ್ರದರ್ಶನಗಳು ನಡೆಯುವುದುಂಟು.
ಇಂದಿರಾಗಾಂಧಿ ಸಂಗೀತ ಕಾರಂಜಿ ಪಾರ್ಕ್:
ಇಂದಿರಾಗಾಂಧಿ ಸಂಗೀತ ಕಾರಂಜಿ ಪಾರ್ಕ್ ತುಂಬಾ ಆಕರ್ಷಣೀಯವಾಗಿದೆ. ದೊಡ್ಡದಾಗಿರುವ ಈ ಪಾರ್ಕ್, ತಾಂತ್ರಿಕವಾಗಿ ಹಲವುವಿಶೇಷತೆಗಳನ್ನು ಹೊಂದಿದ್ದು ಆಧುನಿಕ ಸ್ಪರ್ಶವನ್ನು ಹೊಂದಿದೆ. ನೀವು ಮತ್ತು ನಿಮ್ಮ ಮಕ್ಕಳು ಈ ಸಂಗೀತ ಕಾರಂಜಿ ಪಾರ್ಕ್ ಗೆ ಭೇಟಿ ನೀಡಲೇಬೇಕು. ಇಲ್ಲಿನ ಪರಿಸರ ಮತ್ತು ತಾಜಾ ಗಾಳಿ ನಿಮ್ಮ ಮನಸ್ಸಿಗೆ ಮುದ ನೀಡುವುದು. ಸಂಗೀತಕ್ಕೆ ತಕ್ಕಂತೆ ಕುಣಿಯುವ ಕಾರಂಜಿಗಳು ತುಂಬಾ ಆಕರ್ಷಕವಾಗಿರುತ್ತವೆ. ಈ ಪಾರ್ಕ್ ಬೆಂಗಳೂರಿನ ಅತ್ಯಂತ ಪ್ರಸಿದ್ಧ ಪಾರ್ಕಗಳಲ್ಲಿ ಒಂದಾಗಿದೆ. ನೀವು ಬೆಂಗಳೂರಿನಲ್ಲಿ ಕೆಲವು ರಮಣೀಯ ಸೌಂದರ್ಯವನ್ನು ಆನಂದಿಸಲು, ವಿಶ್ರಾಂತಿ ಪಡೆಯಲು ಅಥವಾ ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಮೋಜು ಮಾಡಲು ಬಯಸುತ್ತೀರಾ?
ಹಾಗಾದರೆ ಬೆಂಗಳೂರಿನ ಪಾರ್ಕಗಳು ಹೇಳಿ ಮಾಡಿಸಿದ ಸ್ಥಳಗಳಾಗಿವೆ. ನೀವು ಖಂಡಿತವಾಗಿಯೂ ಈ ಸ್ಥಳಗಳಿಗೆ ಭೇಟಿ ನೀಡಬೇಕು!