Karnataka logo

Karnataka Tourism
GO UP
Image Alt

ತುಮಕೂರಿನಲ್ಲಿ ನೀವು ಭೇಟಿ ಮಾಡಬಹುದಾದ ಸ್ಥಳಗಳು

separator
  /  ಬ್ಲಾಗ್   /  ತುಮಕೂರಿನಲ್ಲಿ ನೀವು ಭೇಟಿ ಮಾಡಬಹುದಾದ ಸ್ಥಳಗಳು
Places to visit in Tumkur

ತುಮಕೂರಿನಲ್ಲಿ ನೀವು ಭೇಟಿ ಮಾಡಬಹುದಾದ ಸ್ಥಳಗಳು


ನೀವು ತುಮಕೂರಿನಲ್ಲಿ ಎತ್ತರದ ಬೆಟ್ಟಗಳು, ಚಾರಣ ಪ್ರದೇಶಗಳು, ಭವ್ಯವಾದ ಕೋಟೆಗಳು ಮತ್ತು ಪ್ರಾಚೀನ ದೇವಾಲಯಗಳನ್ನು ನೋಡಬಹುದು. ಬೆಂಗಳೂರಿನಿಂದ ಇಲ್ಲಿಗೆ ವಾರಾಂತ್ಯದ ರಜೆಯನ್ನು ಕಳೆಯಲು ಸಾಕಷ್ಟು ಸಂಖ್ಯೆಯಲ್ಲಿ ಜನರು ಬರುತ್ತಾರೆ. ತುಮಕೂರು ಪ್ರವಾಸಿಗರು, ಪ್ರಕೃತಿ ಪ್ರೇಮಿಗಳು, ಯಾತ್ರಿಕರು, ಚಾರಣಿಗರು ಮತ್ತು ಸಾಹಸ ಪ್ರಿಯರಿಗೆ ಸಾಕಷ್ಟು ಆಕರ್ಷಕ ಸ್ಥಳಗಳನ್ನು ಹೊಂದಿದೆ. ತುಮಕೂರು ನಗರವು ಪ್ರಮುಖ ಶಿಕ್ಷಣ ಕೇಂದ್ರವು ಹೌದು.

ತುಮಕೂರಿನಲ್ಲಿರುವ ದೇವಸ್ಥಾನಗಳು

ತುಮಕೂರು ತನ್ನ ಚಾರಣ ಪ್ರದೇಶಗಳು ಮತ್ತು ದೇವಾಲಯಗಳಿಗೆ ಪ್ರಸಿದ್ಧವಾಗಿದೆ .ಈ ಪ್ರಾಚೀನ ದೇವಾಲಯಗಳು ತಮ್ಮ ಭವ್ಯವಾದ ವಾಸ್ತುಶಿಲ್ಪ ಮತ್ತು ಸೊಗಸಾದ ಕರಕುಶಲತೆಗೆ ಹೆಸರುವಾಸಿಯಾಗಿದೆ. ಇಲ್ಲಿ ಪ್ರತಿವರ್ಷ ಸಹಸ್ರಾರು ಭಕ್ತರು ಮತ್ತು ಪ್ರವಾಸಿಗರು ಭೇಟಿ ನೀಡುತ್ತಾರೆ.

ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನ

ತುಮಕೂರಿನ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನವು ತುಂಬಾ ಪ್ರಸಿದ್ಧವಾದ ದೇವಸ್ಥಾನ ಆಗಿದೆ. ತುಮಕೂರಿನಿಂದ ಕೇವಲ 30 ಕಿಮೀ ದೂರದಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನವು ಕೊರಟಗೆರೆ ತಾಲ್ಲೂಕಿನಲ್ಲಿದೆ. ಮಹಾಲಕ್ಷ್ಮಿ ದೇವಿಯು ಇಲ್ಲಿ ಭಕ್ತರಿಗೆ ಸಕಲ ಸಂಪತ್ತುಗಳನ್ನು ಕರುಣಿಸುತ್ತಾ ಅಲ್ಲಿ ನೆಲೆಯಾಗಿದ್ದಾಳೆ. ಹೆಸರೇ ಹೇಳುವಂತೆ, ಮಹಾಲಕ್ಷ್ಮಿಯು ಭಗವಾನ್ ವಿಷ್ಣುವಿನ ಪತ್ನಿ ಮತ್ತು ಸಮೃದ್ಧಿ ಮತ್ತು ಸಂಪತ್ತಿನ ಅಧಿದೇವತೆ ಆಗಿದ್ದಾಳೆ. ಇತಿಹಾಸಕಾರರ ಪ್ರಕಾರ ಈ ದೇವಿಯ ವಿಗ್ರಹವು 1900 ರ ಆರಂಭದಲ್ಲಿ ಸ್ವಯಂ-ಉದ್ಭವವಾಯಿತು. ಇಲ್ಲಿ ಮಹಾಲಕ್ಷ್ಮಿ ಪೂಜೆಯನ್ನು 1952 ರಿಂದ ಪ್ರತಿದಿನ ನಡೆಸಲಾಗುತ್ತದೆ. ದೇವಾಲಯವು ಪ್ರತಿದಿನ ಬೆಳಿಗ್ಗೆ 6 ರಿಂದ ರಾತ್ರಿ 8 ರವರೆಗೆ ತೆರೆದಿರುತ್ತದೆ. ಆದರೆ, ಮಧ್ಯಾಹ್ನ 12.30ರಿಂದ ಸಂಜೆ 5.30ರವರೆಗೆ ವಿರಾಮವಿರುತ್ತದೆ.

ಚೆನ್ನಕೇಶವ ದೇವಸ್ಥಾನ, ಕೈದಾಳ

ಚೆನ್ನಕೇಶವ ದೇವಸ್ಥಾನ, ಕೈದಾಳ

ಈ ದೇವಾಲಯವು ಬೇಲೂರಿನ ಚೆನ್ನಕೇಶವ ದೇವಾಲಯದಂತೆಯೇ ವಿಷ್ಣು ದೇವರಿಗೆ ಸಮರ್ಪಿತವಾಗಿದೆ. ಈ ದೇವಾಲಯದ ಅದ್ಭುತ ಶಿಲ್ಪಗಳನ್ನು ಜಕಣಾಚಾರಿ ಮತ್ತು ಡಂಕಣಾಚಾರಿ ಎಂಬ ಅಂದಿನ ಕಾಲದ ಪ್ರಸಿದ್ಧ ಶಿಲ್ಪಿಗಳು ಕೆತ್ತಿದ್ದಾರೆ. ಈ ದೇವಾಲಯವು ಹೊಯ್ಸಳ ವಾಸ್ತುಶಿಲ್ಪದ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದಾಗಿದೆ.ಕ್ರಿ.ಶ 1263 ರಲ್ಲಿ ನಿರ್ಮಿತವಾದ ಈ ದೇವಾಲಯವು ಈಗ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ರಕ್ಷಿಸಲ್ಪಟ್ಟಿದೆ. ಈ ದೇವಾಲಯವು ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 8.30 ರಿಂದ ರಾತ್ರಿ 8.30 ರವರೆಗೆ ತೆರೆದಿರುತ್ತದೆ ಮತ್ತು ಮಧ್ಯಾಹ್ನ 12.30 ರಿಂದ ಸಂಜೆ 6 ರವರೆಗೆ ವಿರಾಮ ಇರುತ್ತದೆ. ಸಾರ್ವಜನಿಕ ರಜಾದಿನಗಳು ಮತ್ತು ಭಾನುವಾರಗಳಲ್ಲಿ ದೇವಾಲಯದ ತೆರೆಯುವ ಮತ್ತು ಮುಚ್ಚುವ ಸಮಯವು ಭಿನ್ನವಾಗಿರುತ್ತವೆ. ತುರುವೇಕೆರೆಯಲ್ಲಿರುವ ಈ ದೇವಾಲಯವು ವಿಷ್ಣುವಿಗೆ ಸಮರ್ಪಿತವಾಗಿದೆ.

ತುರುವೆಕೇರಿ

ಗಂಗಾಧರೇಶ್ವರ ದೇವಸ್ಥಾನ ತುರುವೇಕೆರೆ

ಒಂದು ಕಾಲದಲ್ಲಿ ತುರುವೆಕೇರಿಯು ಅಗ್ರಹಾರವಾಗಿತ್ತು. 13 ನೇ ಶತಮಾನದಲ್ಲಿ ಹೊಯ್ಸಳರು ನಿರ್ಮಿಸಿದ ಅನೇಕ ದೇವಾಲಯಗಳನ್ನು ನೀವು ಇಲ್ಲಿ ಕಾಣಬಹುದು. ಅಗ್ರಹಾರವೆಂದರೆ ವಿದ್ವಾಂಸ ಬ್ರಾಹ್ಮಣರು ಮತ್ತು ಪುರೋಹಿತರಿಗೆ ಒದಗಿಸಲಾಗುತ್ತಿದ್ದ ಭೂಮಿ ಪ್ರದೇಶವಾಗಿದೆ. ವಿಷ್ಣುವಿಗೆ ಸಮರ್ಪಿತವಾದ ಚೆನ್ನಕೇಶವ ದೇವಾಲಯವು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಈ ದೇವಾಲಯವನ್ನು ಕ್ರಿ.ಶ 1260 ರಲ್ಲಿ ನಿರ್ಮಿಸಲಾಗಿದೆ ಮತ್ತು ಇದು ಉತ್ತರ ಭಾರತೀಯ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ.
ತುಮಕೂರಿನ ಇತರ ಐತಿಹಾಸಿಕ ಪ್ರಾಮುಖ್ಯತೆಯ ದೇವಾಲಯಗಳೆಂದರೆ ಸಿದ್ಧಗಂಗಾ ಮಠ. ಈ ಮಠವು 14 ನೇ ಶತಮಾನದಲ್ಲಿ ಸ್ಥಾಪಿತವಾದ ತೀರ್ಥಯಾತ್ರೆ ಮತ್ತು ಅಧ್ಯಯನ ಕೇಂದ್ರವಾಗಿದೆ. ತುಮಕೂರಿನ ಲಕ್ಷ್ಮೀಕಾಂತಸ್ವಾಮಿ, ದೇವಾಲಯವು ಇಲ್ಲಿನ ದೊಡ್ಡ ಮತ್ತು ಹಳೆಯ ದೇವಾಲಯ ಆಗಿದೆ. ಆರ್ಥರ್, ಚೆನ್ನಕೇಶವ ಮತ್ತು ಪಟ್ಟಲದಮ್ಮ ದೇವಸ್ಥಾನ, ಅರಳಗುಪ್ಪೆ ಇಲ್ಲಿನ ಪ್ರಮುಖ ವೀಕ್ಷಣೆಗೆ ಯೋಗ್ಯವಾದ ಸ್ಥಳಗಳಾಗಿವೆ.

ತುಮಕೂರಿನ ಟ್ರೆಕಿಂಗ್ /ಇತರ ಪ್ರೇಕ್ಷಣೀಯ ಸ್ಥಳಗಳು

ದೇವಾಲಯಗಳ ನಗರ ಮತ್ತು ಶಿಕ್ಷಣ ಕೇಂದ್ರವಾದ ತುಮಕೂರು ಸಾಹಸ ಅನ್ವೇಷಕರು, ಪ್ರಕೃತಿ ಪ್ರೇಮಿಗಳು ಮತ್ತು ಛಾಯಾಗ್ರಾಹಕರ ನೆಚ್ಚಿನ ತಾಣವಾಗಿದೆ. ವಾರಾಂತ್ಯದ ರಜೆಯ ಮೋಜು ಮಸ್ತಿಯನ್ನು ಬಯಸುವ ಬೆಂಗಳೂರಿನ ಜನರಿಗೆ ತುಮಕೂರು ನಗರವು ಸಾಕಷ್ಟು ಆಕರ್ಷಣೆಯ ಸ್ಥಳಗಳನ್ನು ಹೊಂದಿದೆ.

ಮಧುಗಿರಿ ಕೋಟೆ:

ಮಧುಗಿರಿ ಕೋಟೆ

ಮಧುಗಿರಿ ಕೋಟೆಯು ಬೆಂಗಳೂರಿಗೆ ಹತ್ತಿರ ಇರುವ ಇನ್ನೊಂದು ಕೋಟೆಯಾಗಿದೆ. ಇದು ಏಷ್ಯಾದ ಎರಡನೇ ಅತಿ ದೊಡ್ಡ ಏಕಶಿಲಾ ಶಿಲಾಬೆಟ್ಟ ಆಗಿದೆ. ಈ ಐತಿಹಾಸಿಕ ಕೋಟೆಯ ಅವಶೇಷಗಳು ಮತ್ತು ಮೇಲಿನ ನೋಟಗಳು ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತವೆ.ನೀವು ಇದನ್ನು ಪಾದಯಾತ್ರೆಯ ಮೂಲಕ ಚಾರಣ ಮಾಡಬಹುದು.

ದೇವರಾಯನ ದುರ್ಗ: 

ದೇವರಾಯನ ದುರ್ಗ

ದೇವರಾಯನ ದುರ್ಗವು ಭಕ್ತರಿಗೆ ಮತ್ತು ಸಾಹಸ ಪ್ರಿಯರಿಗೆ ಹೇಳಿ ಮಾಡಿಸಿದ ಸೂಕ್ತ ಸ್ಥಳವಾಗಿದೆ. ನೀವು ಈ ಬೆಟ್ಟದ ತುದಿಯಿಂದ ತುಮಕೂರು ಪಟ್ಟಣದ ವಿಹಂಗಮ ದೃಶ್ಯವನ್ನು ನೋಡಬಹುದು. ಈ ಹಸಿರು ಗುಡ್ಡಗಾಡು ಪ್ರದೇಶವು ಯೋಗ ಲಕ್ಷ್ಮೀ ನರಸಿಂಹ ಸ್ವಾಮಿ, ಭೋಗ ನರಸಿಂಹ ಸ್ವಾಮಿ ಮತ್ತು ಭಗವಾನ್ ಹನುಮಂತನಿಗೆ ಸಮರ್ಪಿತವಾಗಿರುವ ಸಂಜೀವರಾಯ ದೇವಾಲಯದಂತಹ ಹಲವು ದೇವಾಲಯಗಳನ್ನು ಹೊಂದಿದೆ. ದೇವರಾಯನ ದುರ್ಗದ ಬೆಟ್ಟದ ಮೇಲೆ ನೀವು ರೋಮಾಂಚಕಾರಿಯಾದ ದೃಶ್ಯಗಳನ್ನು ನೋಡಬಹುದು.
ಇಲ್ಲಿನ ಇತರ ಪ್ರೇಕ್ಷಣೀಯ ಸ್ಥಳಗಳಲ್ಲಿ ಅಣೆಕಟ್ಟುಗಳು, ಜಲಾಶಯಗಳು, ಚಾರಣಗಳು, ಕೋಟೆಗಳು, ಅರಣ್ಯ ಮೀಸಲುಗಳು ಸೇರಿದಂತೆ ಇನ್ನೂ ಹೆಚ್ಚಿನವು ಇವೆ. ಮಾರ್ಕೋನಹಳ್ಳಿ, ಪಾವಗಡ, ಜಯಮಂಗಲಿ ಕೃಷ್ಣಮೃಗ ಸಂರಕ್ಷಿತ ಪ್ರದೇಶ, ನಾಮದ ಚಿಲುಮೆ, ಹುಲಿಯೂರು ದುರ್ಗ, ಹುತ್ರಿದುರ್ಗ, ಚೆನ್ನೈರಾಯನ ದುರ್ಗ, ಕಂದಿಕೆರೆ, ಮಿಡಿಗೇಶಿ, ನಾಗಲಾಪುರ, ನಿಡುಗಲ್, ನಿಟ್ಟೂರು, ನೊಣವಿನಕೆರೆ ಮತ್ತು ತೀತ ಜಲಾಶಯಗಳು ತುಮಕೂರಿನ ಕೆಲವು ಜನಪ್ರಿಯ ಪ್ರೇಕ್ಷಣೀಯ ಸ್ಥಳಗಳಾಗಿವೆ.

ಇಲ್ಲಿಗೆ ತಲುಪುವುದು ಹೇಗೆ?

ಇದೊಂದು ಚಿಕ್ಕ ಪಟ್ಟಣ ಆಗಿದೆ. ಆದರೆ ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಈ ಪಟ್ಟಣಕ್ಕೆ ಸುಲಭವಾಗಿ ತಲುಪಬಹುದು. ಬೆಂಗಳೂರಿನಿಂದ ಕೇವಲ 60 ಕಿಮೀ ದೂರದಲ್ಲಿರುವ ತುಮಕೂರು ರಸ್ತೆಯ ಮೂಲಕ ಸುಮಾರು ಒಂದೂವರೆ ಗಂಟೆಯಲ್ಲಿ ತಲುಪಬಹುದು.

ವಿಮಾನದ ಮೂಲಕ

ತುಮಕೂರು ನಗರಕ್ಕೆ ಇರುವ ಹತ್ತಿರದ ಮತ್ತು ದೊಡ್ಡ ವಿಮಾನ ನಿಲ್ದಾಣವೆಂದರೆ ಬೆಂಗಳೂರು ವಿಮಾನ ನಿಲ್ದಾಣ, ಇದು ಸುಮಾರು 90 ಕಿಮೀ ದೂರದಲ್ಲಿದೆ.

ರೈಲ್ವೆ ಸಾರಿಗೆ ಮೂಲಕ

ತುಮಕೂರನಲ್ಲಿ ರೈಲ್ವೆ ನಿಲ್ದಾಣವಿದೆ. ಇಲ್ಲಿಂದ ರಾಜ್ಯದ ಮತ್ತು ಬೇರೆ ರಾಜ್ಯದ ನಗರಗಳಿಗೆ ಉತ್ತಮ ರೈಲ್ವೆ ಸಂಪರ್ಕವಿದೆ.

ರಸ್ತೆ ಸಾರಿಗೆ ಮೂಲಕ

ರಾಷ್ಟ್ರೀಯ ಹೆದ್ದಾರಿಯು ತುಮಕೂರು ಮತ್ತು ಬೆಂಗಳೂರಿನೊಂದಿಗೆ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ತುಮಕೂರು ಬೆಂಗಳೂರಿನಿಂದ ಕೇವಲ 70 ಕಿಮೀ ದೂರದಲ್ಲಿದೆ.