Karnataka logo

Karnataka Tourism
GO UP
Image Alt

ಕರ್ನಾಟಕದ ಟಾಪ್ 5 ಪರ್ವತಗಳು

separator
  /  ಬ್ಲಾಗ್   /  ಕರ್ನಾಟಕದ ಟಾಪ್ 5 ಪರ್ವತಗಳು

ಕರ್ನಾಟಕದ ಟಾಪ್ 5 ಪರ್ವತಗಳು

ನಮ್ಮ ಗಂಧದ ನಾಡು ಕರ್ನಾಟಕವು ಪ್ರವಾಸಿಗರಿಗೆ ಬೇಕಾದ ಎಲ್ಲವನ್ನು ಹೊಂದಿದೆ. ಸಂಸ್ಕೃತಿ, ಪರಂಪರೆ, ಇತಿಹಾಸ, ಸಾಹಸ, ವನ್ಯಜೀವಿ ಮತ್ತು ನೈಸರ್ಗಿಕ ಸಮೃದ್ಧಿಯಿಂದ ಸಮೃದ್ಧವಾಗಿರುವ ಕರ್ನಾಟಕ ರಾಜ್ಯವು ಕೆಲವು ಅತ್ಯುತ್ತಮ ಪರ್ವತಗಳು ಮತ್ತು ಶಿಖರಗಳಿಗೆ ನೆಲೆಯಾಗಿದೆ. ಈ ಸುಂದರ ಬೆಟ್ಟಗಳು ಪ್ರಕೃತಿ ಪ್ರೇಮಿಗಳು, ಛಾಯಾಗ್ರಾಹಕರು, ಸಾಹಸ ಪ್ರಿಯರು ಮತ್ತು ವನ್ಯಜೀವಿ ಉತ್ಸಾಹಿಗಳಿಗೆ ಅತ್ಯುತ್ತಮ ತಾಣವಾಗಿವೆ.
ಕರ್ನಾಟಕದ ಶಿಖರಗಳು ಚಾರಣಿಗರಿಗೆ ಅನುಕೂಲಕರವಾಗಿದೆ. ಇಲ್ಲಿ ಸುಲಭ ಚಾರಣಗಳೂ, ಕಷ್ಟಕರವಾದ ಚಾರಣ ಬೆಟ್ಟಗಳಿವೆ. ಕರ್ನಾಟಕದಲ್ಲಿ 6330 ಅಡಿಗಳಷ್ಟು ಎತ್ತರದ ಮುಳ್ಳಯ್ಯನಗಿರಿಯಿಂದ ಹಿಡಿದು ದಟ್ಟವಾದ ಕಾಡುಗಳಲ್ಲಿರುವ ಕೆಲವು ಸಣ್ಣ ಬೆಟ್ಟಗಳವರೆಗೆ, ಏರಬಹುದಾದ ಅನೇಕ ಶಿಖರಗಳಿಗೆ ನೆಲೆಯಾಗಿದೆ. ಇಲ್ಲಿ ಅಂತಹ ಕರ್ನಾಟಕದ ಕೆಲವು ಪ್ರಸಿದ್ಧ ಬೆಟ್ಟಗಳನ್ನು ಪಟ್ಟಿ ಮಾಡಲಾಗಿದೆ.

ಮುಳ್ಳಯ್ಯನ ಗಿರಿ

Manjarabad Fort

Mullaiyanagiri

1930 ಮೀಟರ್‌ಗಳಷ್ಟು ಎತ್ತರವುಳ್ಳ ಮುಳ್ಳಯ್ಯನಗಿರಿಯು ಚಿಕ್ಕಮಗಳೂರಿನ ಚಂದ್ರ ದ್ರೋಣ ಬೆಟ್ಟದ ಶ್ರೇಣಿಯಲ್ಲಿದೆ, ಇದು ಕರ್ನಾಟಕದ ಅತಿ ಎತ್ತರದ ಶಿಖರವಾಗಿದ್ದು ದಟ್ಟ ಹಸಿರಿನಿಂದ ಕೂಡಿದೆ. ಇಲ್ಲಿನ ಮೋಡಿ ಮಾಡುವ ಚಾರಣ ಹಾದಿಯು ಚಾರಣಿಗರಿಗೆ ಸ್ವರ್ಗವಾಗಿದೆ ಮತ್ತು ಪ್ರಕೃತಿ ಪ್ರಿಯರ ಮತ್ತು ಛಾಯಾಗ್ರಾಹಕರ ಮನಸೂರೆಗೊಳ್ಳುವ ಸ್ಥಳವಾಗಿದೆ.

ಇಡೀ ಚಾರಣವು ಸುಮಾರು 3 ಕಿಮೀ ಆಗಿದೆ. ಮತ್ತು ಚಾರಣಕ್ಕೆ ಸುಮಾರು 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ತಲುಪುವುದು ಹೇಗೆ?
ಇದು ಬೆಂಗಳೂರಿನಿಂದ ಸರಿಸುಮಾರು 300 ಕಿಮೀ ಮತ್ತು ಮಂಗಳೂರಿನಿಂದ 150 ಕಿಮೀ ದೂರದಲ್ಲಿರುವ ಚಿಕ್ಕಮಗಳೂರಿನ ಹೃದಯಭಾಗದಲ್ಲಿದೆ. ಚಿಕ್ಕಮಗಳೂರನ್ನು ರೈಲು ಅಥವಾ ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು. ನೀವು ಈ ಮಾರ್ಗದಲ್ಲಿ ರೈಲು ಪ್ರಯಾಣವನ್ನು ಮಾಡಲೇ ಬೇಕು. ಆಗ ಮಾತ್ರವೇ ಇಲ್ಲಿನ ಅದ್ಭುತ ಸೌಂದರ್ಯವನ್ನು ಸವಿಯಲು ಸಾಧ್ಯವಾಗುತ್ತದೆ. ಸಾಧ್ಯವಾದರೇ ವಿಸ್ಟಾಡೋಮ್ ರೈಲು ಪ್ರಯಾಣವನ್ನು ಕೈಗೊಂಡು ಅತ್ಯಂತ ಸುಂದರ ಅನುಭವವನ್ನು ನಿಮ್ಮದಾಗಿಸಿಕೊಳ್ಳಿ.

ಭೇಟಿ ನೀಡಲು ಉತ್ತಮ ಸಮಯ
ಚಿಕ್ಕಮಗಳೂರು ಕರ್ನಾಟಕ ಮತ್ತು ದಕ್ಷಿಣ ಭಾರತದಲ್ಲಿಯೇ ಹೆಚ್ಚು ಬೇಡಿಕೆಯಿರುವ ಗಿರಿಧಾಮವಾಗಿದ್ದು ಇಲ್ಲಿಗೆ ವರ್ಷಪೂರ್ತಿ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಮಳೆಗಾಲದ ನಂತರ ಇಲ್ಲಿಗೆ ಭೇಟಿ ನೀಡುವುದು ಉತ್ತಮ. ಏಕೆಂದರೆ ಆ ಸಮಯದಲ್ಲಿ ಹಚ್ಚುಹಸಿರಿನಿಂದ ತುಂಬಿರುತ್ತದೆ. ಈ ಸಮಯ ಚಾರಣವನ್ನು ಮಾಡಲು ಉತ್ತಮ ಸಮಯವಾಗಿದೆ.

ಕುದುರೆಮುಖ

Manjarabad Fort

ಕುದುರೆಮುಖ

ಕರ್ನಾಟಕದ ಎರಡನೇ ಅತಿ ಎತ್ತರದ ಶಿಖರವಾಗಿರುವ ಕುದುರೆಮುಖವು 1894 ಮೀಟರ್ ಎತ್ತರದಲ್ಲಿದೆ. ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖವು ಪಶ್ಚಿಮ ಘಟ್ಟಗಳ ಮಲೆನಾಡು ಪ್ರದೇಶದ ಅತಿದೊಡ್ಡ ರಾಷ್ಟ್ರೀಯ ಉದ್ಯಾನವನಗಳಲ್ಲಿ ಒಂದಾಗಿದೆ. ಕನ್ನಡದಲ್ಲಿ ಹೆಸರೇ ಹೇಳುವಂತೆ ಕುದುರೆಮುಖವು ‘ಕುದುರೆ ಮುಖ’ದ ಆಕಾರದಲ್ಲಿದೆ. ಏಕೆಂದರೆ ಶಿಖರದ ಒಂದು ಭಾಗವು ಕುದುರೆಯ ಮುಖವನ್ನು ಹೋಲುತ್ತದೆ. ಕುದುರೆಮುಖವು ಚಾರಣಿಗರ ಸ್ವರ್ಗವಾಗಿದೆ ಕುದುರೆಮುಖವು ವೈವಿಧ್ಯಮಯ ಮತ್ತು ಆಕರ್ಷಕ ವನ್ಯಜೀವಿಗಳು, ಪ್ರಾಣಿಗಳು, ಸಸ್ಯಗಳು ಮತ್ತು ಟ್ರೆಕ್ಕಿಂಗ್ ಹಾದಿಗಳಿಗೆ ಜನಪ್ರಿಯವಾಗಿದ್ದು ದಟ್ಟವಾದ ಹಚ್ಚ ಹಸಿರಿನ ಅರಣ್ಯದಿಂದ ಸುತ್ತುವರಿದಿದೆ, ಮಂಜಿನ ಆಳವಾದ ಕಮರಿಗಳ ಮೇಲಿರುವ ಹಾದಿಗಳು ಮತ್ತು ಜಲಪಾತಗಳು ಕುದುರೆಮುಖ ಚಾರಣವನ್ನು ಇನ್ನಷ್ಟು ಅವಿಸ್ಮರಣೀಯವಾಗಿಸುತ್ತದೆ.

ಒಟ್ಟು 22 ಕಿಮೀ ದೂರವಿರುವ ಕುದುರೆಮುಖದ ಚಾರಣವು ಸ್ವಲ್ಪ ಕಷ್ಟಕರವಾಗಿದೆ. ಮತ್ತು ಈ ಚಾರಣವು ಸುಮಾರು 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಸಾಹಸಮಯ ಚಾರಣವು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಅಡಿಯಲ್ಲಿ ಬರುವುದರಿಂದ ಅನುಮತಿಯ ಅಗತ್ಯವಿದೆ ಮತ್ತು ಇಲ್ಲಿ ಚಾರಣ ಮಾಡಲು ಪ್ರತಿ ವ್ಯಕ್ತಿಗೆ 600 ರೂ ಶುಲ್ಕವಿದೆ. ಕುದುರೆಮುಖ ಶಿಖರದಲ್ಲಿ ಯಾವುದೇ ಕ್ಯಾಂಪಿಂಗ್ ಗೆ ಅನುಮತಿಗಳಿಲ್ಲ. ಆದಾಗ್ಯೂ, ಈ ಪ್ರದೇಶದಲ್ಲಿ ಹಲವಾರು ಹೋಂಸ್ಟೇಗಳು ಲಭ್ಯವಿವೆ.
ತಲುಪುವುದು ಹೇಗೆ?
ಚಿಕ್ಕಮಗಳೂರಿನಲ್ಲಿರುವ ಕುದುರೆಮುಖವು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 100 ಕಿಮೀ ದೂರದಲ್ಲಿದೆ. ಕುದುರೆಮುಖವನ್ನು ರೈಲು ಮತ್ತು ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು.

ಭೇಟಿ ನೀಡಲು ಉತ್ತಮ ಸಮಯ
ಕುದುರೆಮುಖವು ದಟ್ಟವಾದ ಅರಣ್ಯ ಪ್ರದೇಶವಾಗಿರುವುದರಿಂದ ರಾಜ್ಯದ ಉಳಿದ ಪ್ರದೇಶಗಳಿಗಿಂತ ಹೆಚ್ಚು ತಂಪಾಗಿದೆ ಮತ್ತು ಇಲ್ಲಿ ನೀವು ವರ್ಷವಿಡೀ ಭೇಟಿ ನೀಡಬಹುದು. ಆದಾಗ್ಯೂ, ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ. ಇಲ್ಲಿ ಮಳೆಗಾಲದಲ್ಲಿ ಜಾರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಪ್ರವಾಸಿಗರು ಜಾಗರೂಕರಾಗಿರಬೇಕು.

ತಡಿಯಾಂಡಮೋಲ್

Manjarabad Fort

ತಡಿಯಾಂಡಮೋಲ್

ಕೊಡಗು ಜಿಲ್ಲೆಯ ಅತಿ ಎತ್ತರದ ಶಿಖರವಾಗಿರುವ ಇದು ರಾಜ್ಯದ ಅತ್ಯಂತ ಕಠಿಣವಾದ ಚಾರಣಗಳಲ್ಲಿ ಒಂದಾಗಿದೆ. ಇದರರ್ಥ ಕೊಡವ ಭಾಷೆಯಲ್ಲಿ, ಅತ್ಯುನ್ನತ ಬಿಂದು ಎಂದು. ತಡಿಯಾಂಡಮೋಲ್ ಕರ್ನಾಟಕದ ಅತ್ಯಂತ ಸವಾಲಿನ ಮತ್ತು ಸುಂದರವಾದ ಟ್ರೆಕ್ಕಿಂಗಗಳಲ್ಲಿ ಒಂದಾಗಿದೆ. 1748 ಮೀಟರ್ ಎತ್ತರದ ತಡಿಯಾಂಡಮೋಲ್ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯದಲ್ಲಿದೆ. 6 ಕಿಮೀ ಚಾರಣ ಮಾರ್ಗವು ಕಲ್ಪನೆಗೂ ಮೀರಿದ್ದು ಸ್ವರ್ಗದಂತೆ ಭಾಸವಾಗುತ್ತದೆ. ಮಂಜು ಮುಸುಕಿದ ಬೆಟ್ಟಗಳು, ತಂಪಾದ ಚಳಿಗಾಲದ ರಾತ್ರಿಗಳು, ಜಲಪಾತಗಳು ಮತ್ತು ತೊರೆಗಳು ಇಲ್ಲಿನ ಆಕರ್ಷಣೆಯನ್ನು ಹೆಚ್ಚಿಸುತ್ತವೆ.

ತಲುಪುವುದು ಹೇಗೆ?
ಕೊಡಗು ಜಿಲ್ಲೆಯು ದಕ್ಷಿಣ ಭಾರತದ ಅತ್ಯುತ್ತಮ ಗಿರಿಧಾಮಗಳಲ್ಲಿ ಒಂದಾಗಿದೆ. ಕೊಡಗು ತಲುಪಲು ಉತ್ತಮ ಮತ್ತು ಸುಲಭವಾದ ಮಾರ್ಗವೆಂದರೆ ರಸ್ತೆ ಮಾರ್ಗ. ಇಲ್ಲಿಂದ ಬೆಂಗಳೂರು 250 ಕಿಮೀ ದೂರದಲ್ಲಿದ್ದರೆ, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 138 ಕಿಮೀ ದೂರದಲ್ಲಿದೆ. ಮೈಸೂರಿನ ಮೂಲಕವೂ ಸಹ ಇಲ್ಲಿಗೆ ತಲುಪಬಹುದು. ಮೈಸೂರು, ಬೆಂಗಳೂರು ಮತ್ತು ಮಂಗಳೂರಿನಿಂದ ನೀವು ಸಾರ್ವಜನಿಕ ಸಾರಿಗೆ ಮತ್ತು ಕ್ಯಾಬ್ ಮೂಲಕ ಸಹ ಕೊಡಗು ತಲುಪಬಹುದು.

ಭೇಟಿ ನೀಡಲು ಉತ್ತಮ ಸಮಯ
ಮಾನ್ಸೂನ್ ನಂತರ, ಅಂದರೆ ಸೆಪ್ಟೆಂಬರ್ ನಿಂದ ಮಾರ್ಚ್ ವರೆಗೆ ಕೊಡಗಿಗೆ ಭೇಟಿ ನೀಡಲು ಮತ್ತು ತಡಿಯಂಡಮೋಲ್ ಟ್ರೆಕ್‌ನಲ್ಲಿ ಪಾಲ್ಗೊಳ್ಳಲು ಉತ್ತಮ ಸಮಯವಾಗಿದೆ. ಈ ಪ್ರದೇಶದಲ್ಲಿ ಮಳೆಗಾಲದಲ್ಲಿ ಗುಡ್ಡ ಜಾರುವ ಸಂಭವ ಇರುತ್ತದೆ. ಮತ್ತು ಪ್ರದೇಶವು ಕೆಸರುಮಯವಾಗುವುದರಿಂದ ಜಿಗಣೆಗಳು ಎದುರಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಪ್ರವಾಸಿಗರು ಈ ಸಮಯದಲ್ಲಿ ಹೆಚ್ಚು ಎಚ್ಚರದಿಂದ ಇರಬೇಕು.

ಕುಮಾರ ಪರ್ವತ

Manjarabad Fort

ಕುಮಾರ ಪರ್ವತ

ಚಾರಣಿಗರಲ್ಲಿ ಪ್ರಸಿದ್ಧ ಮತ್ತು ಜನಪ್ರಿಯವಾಗಿರುವ ಕೊಡಗು ಜಿಲ್ಲೆಯ ಕುಮಾರ ಪರ್ವತವು 1712 ಮೀಟರ್ ಎತ್ತರವಿದೆ. ಇದು ರಾಜ್ಯದ ನಾಲ್ಕನೇ ಅತಿ ಎತ್ತರದ ಶಿಖರವಾಗಿದೆ. ಇದು ಹಚ್ಚ ಹಸಿರಿನಿಂದ ತುಂಬಿಕೊಂಡಿದ್ದು ಇಲ್ಲಿನ ಕಡಿದಾದ ಹಾದಿಗಳು ಮತ್ತು ಆಳವಾದ ಕಮರಿಗಳನ್ನು ನೋಡುವುದು ಖಂಡಿತವಾಗಿಯೂ ಚಾರಣಿಗರಿಗೆ ಆನಂದವನ್ನು ನೀಡುತ್ತದೆ. ಈ ಚಾರಣವು ರಾಜ್ಯದ ಕುಕ್ಕೆ ಸುಬ್ರಹ್ಮಣ್ಯದ ದೇವಸ್ಥಾನದ ಸಮೀಪದಲ್ಲಿದೆ. ರಾಜ್ಯದ ಅತ್ಯಂತ ಶ್ರಮದಾಯಕ ಚಾರಣಗಳಲ್ಲಿ ಒಂದಾಗಿರುವ ಕುಮಾರ ಪರ್ವತವನ್ನು ಚಾರಣಿಗರ ಸ್ವರ್ಗ ಎಂದು ಕರೆಯಲಾಗುತ್ತದೆ. 22 ಕೀಲೊ ಮೀಟರವುಳ್ಳ ಈ ಚಾರಣ ಮಾರ್ಗವು ಅನುಕೂಲಕರವಾಗಿದ್ದು ಚಾರಣಿಗರಿಗೆ ಅನುಕೂಲಕರವಾಗಿದೆ.ಇದನ್ನು ಏರಲು ಚಾರಣಿಗರು ಉತ್ತಮ ಫಿಟನೆಸ್ ಹೊಂದಿರುವುದು ಅಗತ್ಯವಾಗಿದೆ. ಇದು ಅರಣ್ಯ ಮೀಸಲು ಪ್ರದೇಶದಲ್ಲಿ ನೆಲೆಗೊಂಡಿರುವುದರಿಂದ, ಚಾರಣ ಮಾಡಲು ನಿಮಗೆ ಅನುಮತಿಯ ಅವಶ್ಯಕತೆ ಇದೆ. ಮತ್ತು ಇದಕ್ಕಾಗಿ ಸಣ್ಣ ಶುಲ್ಕವನ್ನು ವಿಧಿಸಲಾಗುತ್ತದೆ.
ತಲುಪುವುದು ಹೇಗೆ?
ಈ ಚಾರಣವು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಪ್ರಾರಂಭವಾಗುತ್ತದೆ ಮತ್ತು ಸುಲಭವಾಗಿ ತಲುಪಬಹುದು. ದೇವಸ್ಥಾನವನ್ನು ಬಸ್ (ಖಾಸಗಿ ಅಥವಾ ಕೆ ಎಸ್ ಆರ್ ಟಿ ಸಿ ) ಅಥವಾ ಸ್ವಂತ ವಾಹನದ ಮೂಲಕ ತಲುಪಬಹುದು.

ಭೇಟಿಗೆ ಉತ್ತಮ ಸಮಯ
ಕರ್ನಾಟಕದ ಈ ಸವಾಲಿನ ಮತ್ತು ಅತ್ಯಂತ ರಮಣೀಯವಾದ ಚಾರಣವನ್ನು ಏರಲು ಮಳೆಗಾಲದ ನಂತರದ ಅವಧಿಯು ಅತ್ಯುತ್ತಮವಾದ ಸಮಯವಾಗಿದೆ. . ಈ ಅವಧಿಯಲ್ಲಿ ದಟ್ಟವಾದ ಅರಣ್ಯವು ಹಚ್ಚ ಹಸಿರಿನಿಂದ ಕೂಡಿರುತ್ತದೆ ಮತ್ತು ಜಲಪಾತಗಳು ಹಾಗೂ ತೊರೆಗಳು ಧುಮ್ಮಿಕ್ಕುತ್ತವೆ ಮತ್ತು ಮೋಡಗಳು ನಿಮ್ಮನ್ನು ಆವರಿಸಿಕೊಳ್ಳುತ್ತವೆ. ಆದ್ದರಿಂದ ಭೇಟಿ ನೀಡಲು ಉತ್ತಮ ಸಮಯವೆಂದರೆ ಅಕ್ಟೋಬರ್ ನಿಂದ ಮಾರ್ಚ್ ತಿಂಗಳುಗಳು.

ಬ್ರಹ್ಮಗಿರಿ ಬೆಟ್ಟಗಳು

ಇದು ಮತ್ತೊಂದು ಮೋಡಿಮಾಡುವ ಮತ್ತು ಸುಂದರವಾದ ಚಾರಣವಾಗಿದ್ದು ಕೇರಳ ಮತ್ತು ಕರ್ನಾಟಕ ಎರಡರೊಂದಿಗೂ ಗಡಿಯನ್ನು ಹಂಚಿಕೊಂಡು ಪಶ್ಚಿಮ ಘಟ್ಟಗಳಲ್ಲಿ ನೆಲೆಸಿದೆ. ಬ್ರಹ್ಮಗಿರಿ ಒಂದು ಕಡೆಯಿಂದ ವಯನಾಡ್ ಮತ್ತು ಇನ್ನೊಂದು ಬದಿಯಿಂದ ಕೂರ್ಗ್‌ನಿಂದ ಪ್ರವೇಶಿಸಬಹುದು. 1608 ಮೀಟರ್ ಎತ್ತರದಲ್ಲಿರುವ ಬ್ರಹ್ಮಗಿರಿ ಕರ್ನಾಟಕದ ಹತ್ತು ಶಿಖರಗಳಲ್ಲಿ ಒಂದಾಗಿದ್ದು. ದಟ್ಟವಾದ ಕಾಡುಗಳು, ರಮಣೀಯ ಹಾದಿಗಳು ಮತ್ತು ಅದ್ಭುತ ವನ್ಯಜೀವಿಗಳಿಂದ ಸುತ್ತುವರೆದಿದೆ. ಇದು ಖಂಡಿತವಾಗಿಯೂ ಚಾರಣಿಗರು, ವನ್ಯಜೀವಿ ಉತ್ಸಾಹಿಗಳು ಮತ್ತು ಛಾಯಾಗ್ರಾಹಕರ ಸ್ವರ್ಗವಾಗಿದೆ. ಒಬ್ಬ ಹವ್ಯಾಸಿ ಕೂಡ ಮಾಡಬಹುದಾದಷ್ಟು ಸುಲಭವಾಗಿರುವ ಈ ಚಾರಣವನ್ನು ಏರಲು ಸುಮಾರು 3- 4 ಗಂಟೆಗಳು ಬೇಕಾಗುತ್ತದೆ. ಸುಮಾರು 10 ಕಿಮೀಗಳ ಒಟ್ಟು ದೂರವನ್ನು ಸರಿಸುಮಾರು 8 ಗಂಟೆಗಳಲ್ಲಿ ಕ್ರಮಿಸಬಹುದು. ತಿರುನೆಲ್ಲಿ ದೇವಸ್ಥಾನ, ಮುನಿಕಲ್ ಗುಹೆಗಳು ಮತ್ತು ಇರುಪ್ಪು ಜಲಪಾತಗಳು ಈ ಚಾರಣದ ಮುಖ್ಯಾಂಶಗಳಾಗಿವೆ. ಈ ಪ್ರದೇಶದಲ್ಲಿ ಕಾಡು ಪ್ರಾಣಿಗಳು ಅದರಲ್ಲೂ ಆನೆಗಳ ಬಗ್ಗೆ ಜಾಗರೂಕರಾಗಿರಬೇಕು.

ತಲುಪುವುದು ಹೇಗೆ?
ಕೊಡಗನ್ನು ಮಂಗಳೂರು, ಬೆಂಗಳೂರು ಮತ್ತು ಮೈಸೂರಿನಿಂದ ಸುಲಭವಾಗಿ ರಸ್ತೆ ಸಾರಿಗೆಯ ಮೂಲಕ ತಲುಪಬಹುದು. ನಂತರ ಕೊಡಗಿನಿಂದ ಬ್ರಹ್ಮಗಿರಿಯನ್ನು ಸುಲಭವಾಗಿ ತಲುಪಬಹುದು. ಇಲ್ಲಿಗೆ ದೇಶದ ಬಹುತೇಕ ಪ್ರಮುಖ ನಗರಗಳಿಂದ ಸಾಕಷ್ಟು ರೈಲುಗಳು ಮತ್ತು ವಿಮಾನ ಸೌಲಭ್ಯಗಳಿವೆ. ಈ ನಗರಗಳಿಂದ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ಸಹ ಸಂಚರಿಸುತ್ತವೆ.

ಭೇಟಿ ನೀಡಲು ಉತ್ತಮ ಸಮಯ
ಮಳೆಗಾಲದ ನಂತರ, ಅಂದರೆ ಅಕ್ಟೋಬರ್‌ನಿಂದ ಮಾರ್ಚ್‌ವರೆಗಿನ ಅವಧಿಯು ಬ್ರಹ್ಮಗಿರಿ ಬೆಟ್ಟಗಳನ್ನು ಏರಲು ಉತ್ತಮವಾದ ಕಾಲವಾಗಿದೆ. ಈ ಪ್ರದೇಶದಲ್ಲಿ ಮಳೆಗಾಲದಲ್ಲಿ ಗುಡ್ಡ ಜಾರುವ ಸಂಭವ ಇರುತ್ತದೆ. ಮತ್ತು ಪ್ರದೇಶವು ಕೆಸರುಮಯವಾಗುವುದರಿಂದ ಜಿಗಣೆಗಳು ಎದುರಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಪ್ರವಾಸಿಗರು ಈ ಸಮಯದಲ್ಲಿ ಹೆಚ್ಚು ಎಚ್ಚರದಿಂದ ಇರಬೇಕು.
ಈ ಬೆಟ್ಟಗಳಲ್ಲಿ ಕಸವನ್ನು ಮತ್ತು ಅನುಪಯುಕ್ತ ವಸ್ತುಗಳನ್ನು ಚೆಲ್ಲಬೇಡಿ. ನಿಮ್ಮೊಂದಿಗೆ ಒಂದು ಕಸ ತುಂಬುವ ಚೀಲ ತೆಗೆದುಕೊಂಡು ಹೋಗಿ. ಬರುವಾಗ ಅದರಲ್ಲಿ ನಿಮಗೆ ಬೇಡವಾದ ವಸ್ತುಗಳನ್ನು ಹಾಕಿಕೊಂಡು ಬನ್ನಿ. ಬೆಟ್ಟಗಳ ಪರಿಸರವನ್ನು ಸ್ವಚ್ಛವಾಗಿಡಿ.