Karnataka logo

Karnataka Tourism
GO UP
Image Alt

ವಿಜಯಪುರದಲ್ಲಿ ನೋಡಲೇಬೇಕಾದ ಸ್ಥಳಗಳು

separator
  /  ಬ್ಲಾಗ್   /  ವಿಜಯಪುರದಲ್ಲಿ ನೋಡಲೇಬೇಕಾದ ಸ್ಥಳಗಳು
Gol Gumbaz,Vijayapura

ವಿಜಯಪುರದಲ್ಲಿ ನೋಡಲೇಬೇಕಾದ ಸ್ಥಳಗಳು

50 ಮಸೀದಿಗಳು, 20ಕ್ಕೂ ಹೆಚ್ಚು ಸಮಾಧಿಗಳು, ಕೆಲವು ಅರಮನೆಗಳು ಮತ್ತು ಅವಶೇಷಗಳನ್ನು ಹೊಂದಿರುವ ವಿಜಯಪುರವು, ರಾಜ್ಯದ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಐತಿಹಾಸಿಕ ಪಟ್ಟಣಗಳಲ್ಲಿ ಒಂದಾಗಿದೆ. ಹಿಂದೆ ಬಿಜಾಪುರ ಎಂದು ಕರೆಯಲ್ಪಡುತ್ತಿದ್ದ ವಿಜಯಪುರ, ಕರ್ನಾಟಕದ ಉತ್ತರ ಭಾಗದಲ್ಲಿದ್ದು, ಮಹಾರಾಷ್ಟ್ರದ ಸಾಂಗ್ಲಿ ಮತ್ತು ಸೋಲಾಪುರ ಪಟ್ಟಣಗಳಿಗೆ ಹತ್ತಿರದಲ್ಲಿದೆ. ನಿಸ್ಸಂದೇಹವಾಗಿ ವಿಜಯಪುರವು ನೋಡಲು ಆಸಕ್ತಿದಾಯಕವಾದ ಅನೇಕ ಸ್ಥಳಗಳನ್ನು ಹೊಂದಿದೆ.

ಆದಿಲ್ ಶಾಹಿ ರಾಜವಂಶದ ಅವಧಿಯಲ್ಲಿ ನಿರ್ಮಿಸಲಾದ ಐತಿಹಾಸಿಕ ಪ್ರಾಮುಖ್ಯತೆ ಹೊಂದಿರುವ ವಾಸ್ತುಶಿಲ್ಪದ ಅದ್ಭುತಗಳಿಗೆ ಈ ನಗರವು ಹೆಸರುವಾಸಿಯಾಗಿದೆ. ವಿಜಯಪುರವು ಕರ್ನಾಟಕದ ಪ್ರಮುಖ 10 ನಗರಗಳಲ್ಲಿ ಒಂದಾಗಿದ್ದು, ವಿಶೇಷವಾಗಿ ಅದರಲ್ಲಿನ ಸ್ಮಾರಕಗಳಿಗಾಗಿ ಗುರುತಿಸಲ್ಪಡುತ್ತಿದೆ. ಭಾರತದ ಅತಿದೊಡ್ಡ ಗುಮ್ಮಟವಾದ ಗೋಲ್ ಗುಂಬಜ್‌ಅನ್ನು ಹೊಂದಿರುವ ವಿಜಯಪುರವು ಇತರ ಅನೇಕ ಸ್ಮಾರಕಗಳು ಮತ್ತು ಕೋಟೆಗಳ ಅವಶೇಷಗಳಿಗೆ ನೆಲೆಯಾಗಿದೆ.

ಕಲ್ಯಾಣಿ ಚಾಲುಕ್ಯರಿಂದ 10 ರಿಂದ 11ನೇ ಶತಮಾನಗಳಲ್ಲಿ ಸ್ಥಾಪಿತವಾದ ಪಾರಂಪರಿಕ ಹಾಗೂ ಯಾವಾಗಲೂ ವಿಜಯದ ನಗರವಾಗಿದ್ದ ಬಿಜಾಪುರಕ್ಕೆ 2014ರಲ್ಲಿ ಅದರ ಮೂಲ ಹೆಸರು, ವಿಜಯಪುರ ಎಂದು ಮರುನಾಮಕರಣ ಮಾಡಲಾಯಿತು. ವಿಜಯಪುರವು ಮೊದಲು 13ನೇ ಶತಮಾನದ ಅಂತ್ಯದ ವೇಳೆಗೆ ದೆಹಲಿಯ ಸುಲ್ತಾನನಾದ ಅಲ್ಲಾವುದ್ದೀನ್ ಖಿಲ್ಜಿಯಿಂದಾಗಿ ಮುಸ್ಲಿಂ ಪ್ರಭಾವಕ್ಕೆ ಒಳಪಟ್ಟಿತು. ನಂತರ 1347ರಲ್ಲಿ ಬೀದರ್‌ನ ಬಹಮನಿ ರಾಜರ ಆಳ್ವಿಕೆಗೆ ಒಳಪಟ್ಟಿತು. 1723ರವರೆಗೆ ಮೊಘಲರ ಆಳ್ವಿಕೆಗೆ ಒಳಪಟ್ಟಿದ್ದ ಈ ನಗರ, ಆದಿಲ್ ಷಾಹಿ ರಾಜನ ಆಳ್ವಿಕೆಯ ಕಾಲದಲ್ಲಿ ಸಾಂಸ್ಕೃತಿಕವಾಗಿ, ಶ್ರೀಮಂತ ಸಾಮ್ರಾಜ್ಯವಾಗಿ ಮಾರ್ಪಟ್ಟಿತು. ವಿವಿಧ ಕ್ಷೇತ್ರಗಳಿಗೆ ಹೆಸರಾಗಿ ದೂರದ ಸ್ಥಳಗಳಾದ ಪರ್ಷಿಯಾ ಮತ್ತು ಅರೇಬಿಯಾದ ಸಂಗೀತಗಾರರು, ಕಲಾವಿದರು ಮತ್ತು ವಿದ್ವಾಂಸರನ್ನು ಆಕರ್ಷಿಸಿತು. ಜನಪ್ರಿಯ ಉರ್ದು ಕಾವ್ಯ ಸಂಕಿರಣವಾದ ಮುಶೈರಾ ಪ್ರಕಾರವು ಬಿಜಾಪುರದಲ್ಲಿ ಉಗಮಗೊಂಡು, ಉತ್ತರ ಭಾರತ ಮತ್ತು ದೇಶದ ಇತರ ಭಾಗಗಳಲ್ಲಿ ಹರಡಿಕೊಂಡಿತು ಎಂದು ನಂಬಲಾಗಿದೆ.

ವಿಜಯಪುರದಲ್ಲಿ ನೋಡಬೇಕಾದ ಸ್ಥಳಗಳು

ಪಾರಂಪರಿಕ ಮತ್ತು ಐತಿಹಾಸಿಕ ನಗರವಾಗಿರುವ ವಿಜಯಪುರವು ಉತ್ಕೃಷ್ಟವಾದ ಮೊಘಲ್ ಮತ್ತು ಭಾರತೀಯ ವಾಸ್ತುಶಿಲ್ಪ ಮತ್ತು ಕರಕುಶಲತೆಯ ಮಿಶ್ರಣವನ್ನು ಒಳಗೊಂಡಿದ್ದು, ಪ್ರವಾಸಿಗರಿಗೆ, ಸಂಶೋಧಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ಎಲ್ಲಾ ಇತಿಹಾಸ ಮತ್ತು ವಾಸ್ತುಶಿಲ್ಪವನ್ನು ಆಸ್ವಾದಿಸುವ ಉತ್ಸಾಹಿಗಳಿಗಾಗಿ ಸಾಕಷ್ಟು ತಾಣಗಳನ್ನು ಹೊಂದಿದೆ.

ದೇವಾಲಯಗಳು ಮತ್ತು ಮಸೀದಿಗಳು

ಪಾರಂಪರಿಕ ದೇವಾಲಯಗಳು ಮತ್ತು ಮಸೀದಿಗಳ ಕೇಂದ್ರವಾಗಿರುವ ವಿಜಯಪುರವು ಪ್ರವಾಸಿಗರು ಮತ್ತು ಯಾತ್ರಾರ್ಥಿಗಳ ಸಂತಸ ನೀಡುವ ಪ್ರದೇಶವಾಗಿದೆ.
1. ಜಾಮಿಯಾ ಮಸೀದಿ: ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪ ಹೊಂದಿರುವ ಈ ಪವಿತ್ರ ಮಸೀದಿಯ ಮಧ್ಯದ ಗೋಡೆಯು ಪವಿತ್ರ ಕುರಾನ್‌ನ ಗೆರೆಗಳಿಂದ ಆವೃತವಾಗಿದೆ. ಹೊರಾಂಗಣ, ವಿಶೇಷವಾಗಿ ಈರುಳ್ಳಿ ಆಕಾರದ ಕಿರೀಟದ ಗುಮ್ಮಟ, ಹಜಾರಗಳು ಮತ್ತು ಕಾರಿಡಾರ್‌ಗಳು, ಸೊಗಸಾದ ಕಮಾನುಗಳು, ಸಭಾಂಗಣ ಇತ್ಯಾದಿಗಳು ಆದಿಲ್ ಶಾಹಿಯ ಇಂಡೋ-ಇಸ್ಲಾಮಿಕ್ ಶೈಲಿಯ ವಾಸ್ತುಶಿಲ್ಪಕ್ಕೆ ಅತ್ಯುತ್ತಮ ಉದಾಹರಣೆಯಾಗಿವೆ.
2. ಶಿವಗಿರಿ ದೇವಾಲಯ:  85 ಅಡಿ ಎತ್ತರದ, ದೇಶದ ಎರಡನೇ ಅತಿ ದೊಡ್ಡ ಶಿವನ ಪ್ರತಿಮೆಗೆ ನೆಲೆಯಾಗಿರುವ ಶಿವಗಿರಿ ದೇವಾಲಯವು ಈಗ ಅತ್ಯಂತ ಬೇಡಿಕೆಯ ಯಾತ್ರಾಸ್ಥಳವಾಗಿ ರೂಪುಗೊಳ್ಳುತ್ತಿದೆ. ಈ ಪ್ರತಿಮೆಯು ಸುಮಾರು ೧೫೦೦ ಟನ್ ತೂಕವಿದ್ದು, ದೊಡ್ಡ ಪ್ರತಿಮೆಯ ಕೆಳಗೆ ಸಣ್ಣ ಶಿವಲಿಂಗವನ್ನು ಸ್ಥಾಪಿಸಲಾಗಿದೆ.
3. ಮುದ್ದೇಬಿಹಾಳ: ಮುದ್ದೇಬಿಹಾಳ ಶಿವ, ಹನುಮಂತ, ದತ್ತಾತ್ರೇಯ, ಪಾಂಡುರಂಗ, ದುರ್ಗಾದೇವಿ, ಮಲ್ಲಯ್ಯ, ಮರುಳಸಿದ್ದೇಶ್ವರ ಮತ್ತು ಬನಶಂಕರಿ ದೇವಾಲಯಗಳಿಗೆ ನೆಲೆಯಾಗಿದೆ. ಜೊತೆಗೆ ಮುದ್ದೇಬಿಹಾಳದಲ್ಲಿ ಹಳೆಯ ಕೋಟೆಯ ಅವಶೇಷಗಳೂ ಇವೆ.
4. ಇಂಗಳೇಶ್ವರ:ಎಂಟು ಪ್ರಾಚೀನ ದೇವಾಲಯಗಳ ಸಮೂಹವಾಗಿರುವ ಇಂಗಳೇಶ್ವರ ದೇವಾಲಯವು, ಸಿದ್ದೇಶ್ವರ ಮತ್ತು ಅಕ್ಕ ನಾಗಮ್ಮ ಗುಹಾಂತರ ದೇವಾಲಯಗಳನ್ನು ಒಳಗೊಂಡಿದ್ದು, ವಿಜಯಪುರದಲ್ಲಿ ಬೇಟಿ ನೀಡಿಲೇಬೇಕಾದ ಸ್ಥಳವಾಗಿದೆ. ಸೋಮೇಶ್ವರ ದೇವಾಲಯವು ಸುಂದರವಾಗಿ ಕೆತ್ತಿದ, ಕಲ್ಯಾಣ ಚಾಲುಕ್ಯರ ಕಾಲಕ್ಕೆ ಸೇರಿದ 36 ಸ್ತಂಭಗಳನ್ನು ಹೊಂದಿರುವ ಮತ್ತೊಂದು ದೇವಾಲಯವಾಗಿದ್ದು, ನಗರದ ಅತಿದೊಡ್ಡ ದೇವಾಲಯವೆಂದು ನಂಬಲಾಗಿದೆ.
5. ಸಹಸ್ರಪಾಣಿ ಪಾರ್ಶ್ವನಾಥ ಬಸದಿ: ವಿಜಯಪುರದ ಹೊರವಲಯದಲ್ಲಿರುವ ಈ ಜೈನ ದೇವಾಲಯವು ಪಾರ್ಶ್ವನಾಥರ ವಿಶಿಷ್ಟ ವಿಗ್ರಹವನ್ನು ಹೊಂದಿದೆ. 1500 ವರ್ಷಗಳಷ್ಟು ಹಳೆಯದಾಗಿದ್ದು, ಸುಂದರವಾಗಿ ಕೆತ್ತಲಾದ ಈ ವಿಗ್ರಹವನ್ನು 1008 ಎಡೆಯ ಹಾವಿನಿಂದ ಅಲಂಕರಿಸಲಾಗಿದೆ. ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು (ಪೂರ್ಣಿಮಾ ಮತ್ತು ಅಮಾವಾಸ್ಯೆ) ದೇವರಿಗೆ ಎರೆಯುವ ಹಾಲು, ಇಡೀ ವಿಗ್ರಹವನ್ನು ಬಳಸಿ, ಎಲ್ಲಾ 1008 ಎಡೆಗಳ ಮಧ್ಯೆ ಹರಿಯುವ ದೃಷ್ಟ ಅದ್ಭುತವಾಗಿರುತ್ತದೆ.

ತಿಲಗೂರು, ತಿಕೋಟಾ, ಸಿಂದಗಿ, ಸಾಲೋಟಗಿ, ಇಂಡಿ, ಅಲ್ಮೆಲ, ಅಗರಖೇಡ್, ಇತ್ಯಾದಿ ಸ್ಥಳಗಳು ಇಲ್ಲಿನ ಇತರ ಪವಿತ್ರ ಅಥವಾ ಪೂಜಾ ಸ್ಥಳಗಳಾಗಿವೆ.

ವಿಜಯಪುರದ ಪಾರಂಪರಿಕ ತಾಣಗಳು ಮತ್ತು ಸ್ಮಾರಕಗಳು

ಮೊಘಲ್ ವಾಸ್ತುಶಿಲ್ಪ ಆಧಾರಿತ ಸ್ಮಾರಕಗಳಿಗೆ ಹೆಸರುವಾಸಿಯಾಗಿರುವ ವಿಜಯಪುರದ ಈ ಪಾರಂಪರಿಕ ತಾಣಗಳ ಬಗ್ಗೆ ತಿಳಿದು ಮೆಚ್ಚುಗೆ ಸೂಚಿಸಲು ಈ ಸ್ಥಳಗಳಿಗೆ ಭೇಟಿ ನೀಡಲೇಬೇಕು.
1. ಗೋಲ್ ಗುಂಬಜ್: ಅದ್ಭುತವಾದ ಕಲಾಕೃತಿ ಮತ್ತು ವಿಶ್ವದ ಎರಡನೇ ಅತಿ ದೊಡ್ಡ ಗುಮ್ಮಟವಾಗಿರುವ ಗೋಲ್ ಗುಂಬಜ್, 210 ಅಡಿ ಎತ್ತರವಿರುವ ಭವ್ಯವಾದ ಸಮಾಧಿಯಾಗಿದೆ. ಮುಹಮ್ಮದ್ ಆದಿಲ್ ಷಾನಿಂದ ನಿರ್ಮಿಸಲ್ಪಟ್ಟ ಗೋಲ್‌ ಗುಂಬಜ್, ನಾಲ್ಕು ಮೂಲೆಗಳಲ್ಲಿ ಏಳು ಅಂತಸ್ತಿನ ಅಷ್ಟಭುಜಾಕೃತಿಯ ಗೋಪುರಗಳನ್ನು ಮತ್ತು ಮೇಲ್ಚಾವಣಿಯ ಕೆಳಗೆ ವಿಶಿಷ್ಟ ಕಲಾಕೃತಿಗಳನ್ನು ಹೊಂದಿದೆ. ಯಾವುದೇ ಕಂಬಗಳ ಬೆಂಬಲವನ್ನು ಹೊಂದಿರದ ಈ ಗುಮ್ಮಟವು ರೋಮ್ ನ ಸೇಂಟ್ ಪೀಟರ್ಸ್ ಬೆಸಿಲಿಕಾದ ನಂತರದ ಸ್ಥಾನವನ್ನು ಪಡೆದಿದೆ.

ಗೋಲ್‌ ಗುಂಬಜ್‌ಗೆ ಹತ್ತಿರದಲ್ಲೇ ಇರುವ, ವಿಜಯಪುರದ ಪ್ರಾಚೀನ ವಸ್ತುಗಳನ್ನು ಹೊಂದಿರುವ ಪ್ರದರ್ಶಿಸುವ ವಿಜಯಪುರ ಪುರಾತತ್ವ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡುವುದನ್ನು ಮರೆಯದಿರಿ.
Ibrahim Roza

ಗೋಲ್ ಗುಂಬಜ್

2. ಇಬ್ರಾಹಿಂ ರೋಜಾ: ಭಾರತದ ಅತ್ಯಂತ ಸುಂದರವಾದ ಇಸ್ಲಾಮಿಕ್ ಸ್ಮಾರಕಗಳಲ್ಲಿ ಒಂದಾದ ಇಬ್ರಾಹಿಂ ರೋಜಾ ಆಗ್ರಾದ ತಾಜ್ ಮಹಲ್ ಕಟ್ಟಲು ಸ್ಫೂರ್ತಿಯಾಗಿದೆ ಎಂದು ಹೇಳಲಾಗುತ್ತದೆ.
Ibrahim Roza

ಇಬ್ರಾಹಿಂ ರೋಜಾ

3. ಬಾರಾ ಕಮಾನ್: ಪೂರ್ಣಗೊಳ್ಳದ ಭವ್ಯ ಕಟ್ಟಡವಾಗಿರುವ ಬಾರಾ ಕಮಾನ್ ವಿಜಯಪುರದ ಪ್ರಮುಖ ಆಕರ್ಷಣೆಯಾಗಿದೆ. 12 ಆಕರ್ಷಕ ಕಮಾನುಗಳನ್ನು ಹೊಂದಿರುವ ಇದು, ಎರಡನೇ ಅಲಿ ಆದಿಲ್ ಷಾನ ಅಪೂರ್ಣವಾಗಿರುವ ಸಮಾಧಿ. ಇದರ ನಿರ್ಮಾಣವು ಎರಡನೇ ಅಲಿ ಆದಿಲ್ ಷಾ ಸಾವಿನಿಂದಾಗಿ ನಿಂತುಹೋಯಿತು. ಇದು ಗೋಲ್ ಗುಂಬಜ್‌ಗೆ ಪ್ರತಿಸ್ಪರ್ಧಿ ಎಂದು ನಂಬಲಾಗಿದೆ.
Ibrahim Roza

ಬಾರಾ ಕಮಾನ್

4. ಗಗನ್ ಮಹಲ್: ಹೆಸರೇ ಸೂಚಿಸುವಂತೆ, ಮೇಲ್ಚಾವಣಿಯಿಲ್ಲದ ಈ ರಚನೆಯು, 1561ರ ಸುಮಾರಿಗೆ ಒಂದನೇ ಅಲಿ ಆದಿಲ್ ಷಾ ನಿರ್ಮಿಸಿದ ಅರಮನೆ ಮತ್ತು ದರ್ಬಾರ್ ಹಾಲ್ ಆಗಿದೆ. ಅರಮನೆಯ ಪ್ರಮುಖ ಆಕರ್ಷಣೆಯಾದ 60 ಅಡಿ ಮತ್ತು 9 ಇಂಚುಗಳ ಅಗಲವಿರುವ ದೊಡ್ಡ ಮಧ್ಯದ ಕಮಾನು, ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪಕ್ಕೆ ಒಂದು ಸೊಗಸಾದ ಉದಾಹರಣೆಯಾಗಿದೆ.
5. ವಿಜಯಪುರದ ಇತರ ಪ್ರಸಿದ್ಧ ಸ್ಮಾರಕಗಳು: ಮಲಿಕ್-ಎ-ಮೈದಾನ್, ಮೆಹ್ತಾರ್ ಮಹಲ್ ಉಪ್ಲಿ ಬುರುಜ್, ತಾಜ್ ಬಾವಡಿ, ತಾಳಿಕೋಟೆ ಜೋದ್ ಗುಂಬಜ್, ಅಸರ್ ಮಹಲ್, ಆನಂದ್ ಮಹಲ್, ಅಂದು ಮಸೀದಿ, ಛೋಟಾ ಅಸರ್, ಚೀನಿ ಮಹಲ್, ಜಲ ಮಂಜಿಲ್, ಜಾಮಿ ಮಸೀದಿ, ಚಾಂದ್ ಬಾವಡಿ, ಬುಖಾರಿ ಮಸೀದಿ, ಔರಂಗಜೇಬ್ ಈದ್ಗಾ, ಮೋತಿ ಗುಂಬಜ್, ಮುಸ್ತಫಾ ಖಾನ್ ಅವರ ಮಸೀದಿ ಮತ್ತು ಅರಮನೆ, ಮಲಿಕ್ ಸಂದಲ್ ಮಸೀದಿ, ಮಲಿಕ್ ಜಹಾನ್ ಬೇಗಂ ಅವರ ಮಸೀದಿ, ರಾಮ ಮಂದಿರ, ರತುಲ್ಲಾ ಖಾನ್ ಅವರ ಮಸೀದಿ, ಪರಮೇಶ್ವರ ದೇವಾಲಯ, ನವ್ ಗುಂಬಜ್, ನರಸಿಂಹ ದೇವಾಲಯ, ಪಾಣಿ ಮಹಲ್, ಸಾತ್ ಮಂಜಿಲ್, ಸಿದ್ದೇಶ್ವರ ದೇವಾಲಯ, ದೇವರ ನಿಂಬರಗಿ, ಯಾಕುಟ್ ದಬುಲಿಯ ಸಮಾಧಿ ಮತ್ತು ಮಸೀದಿ, ಆರ್ಕ್-ಕಿಲ್ಲಾ, ಇತ್ಯಾದಿ

ಭೇಟಿ ನೀಡಲು ಉತ್ತಮವಾದ ಸಮಯ:

ಕರ್ನಾಟಕದ ಉತ್ತರ ಭಾಗದಲ್ಲಿರುವ ವಿಜಯಪುರ ಬಿಸಿಯಾದ ಸ್ಥಳವಾಗಿದೆ. ಮಾನ್ಸೂನ್ ನಂತರದ ಸಮಯ, ಅಂದರೆ ಅಕ್ಟೋಬರ್ ನಿಂದ ಫೆಬ್ರವರಿಯವರೆಗಿನ ಸಮಯವು ಭೇಟಿ ನೀಡಲು ಉತ್ತಮವಾದ ಸಮಯವಾಗಿದ್ದು, ಹವಾಮಾನವು ಆಹ್ಲಾದಕರವಾಗಿರುವುದರಿಂದ ಸ್ಮಾರಕಗಳಿಗೆ ಭೇಟಿ ನೀಡಲು ಆರಾಮದಾಯಕವಾಗಿರುತ್ತದೆ. ಈ ಪ್ರಯಾಣವು ಸಾಕಷ್ಟು ನಡಿಗೆಯನ್ನು ಒಳಗೊಂಡಿರುರಿಂದ ಸಾಕಷ್ಟು ಕುಡಿಯುವ ನೀರನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ಬೂಟುಗಳು ಅರಾಮದಾಯಕವಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ತಲುಪುವುದು ಹೇಗೆ?

ವಿಜಯಪುರವು ರಸ್ತೆ ಮತ್ತು ರೈಲು ಮಾರ್ಗದ ಮೂಲಕ ಕರ್ನಾಟಕದಾದ್ಯಂತ ಉತ್ತಮ ಸಂಪರ್ಕವನ್ನು ಹೊಂದಿದೆ. ರಾಜ್ಯ ರಾಜಧಾನಿಯಾದ ಬೆಂಗಳೂರಿನಿಂದ ಸುಮಾರು 524 ಕಿ.ಮೀ ದೂರದಲ್ಲಿರುವ ವಿಜಯಪುರ ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲಿನಂತಹ ಇತರ ಪಾರಂಪರಿಕ ತಾಣಗಳಿಗೆ ಭೇಟಿ ನೀಡಲು ಅತ್ಯುತ್ತಮವಾದ ಮೂಲ ನಿಲ್ದಾಣವಾಗಿದೆ.
ವಿಮಾನದ ಮೂಲಕ
ಉಡಾನ್ ಯೋಜನೆಯಡಿ, ಕಲಬುರಗಿಯಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗಿದ್ದು, ಈ ನಿಲ್ದಾಣವು ಸುಮಾರು 166 ಕಿ.ಮೀ ದೂರದಲ್ಲಿದೆ. ಆದರೆ ಕಡಿಮೆ ಸಂಖ್ಯೆಯ ವಿಮಾನಗಳನ್ನು ಹೊಂದಿದೆ. ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣ ಎರಡೂ ಸುಮಾರು 200 ಕಿ.ಮೀ. ದೂರದಲ್ಲಿದ್ದು, ವಿಜಯಪುರವನ್ನು ತಲುಪಲು ಅನುಕೂಲಕರ ವಿಮಾನ ನಿಲ್ದಾಣಗಳಾಗಿವೆ.
ರೈಲಿನ ಮೂಲಕ
ವಿಜಯಪುರವು ರೈಲು ನಿಲ್ದಾಣವನ್ನು ಹೊಂದಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರದ ಹೆಚ್ಚಿನ ಪ್ರಮುಖ ನಗರಗಳೊಂದಿಗೆ ರೈಲ್ವೇ ಸಂಪರ್ಕವನ್ನು ಹೊಂದಿದೆ.
ರಸ್ತೆಯ ಮೂಲಕ
ಕರ್ನಾಟಕದ ಉತ್ತರ ಭಾಗದಲ್ಲಿರುವ ವಿಜಯಪುರವು ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಿಂದ ಸುಲಭವಾಗಿ ಸಂಪರ್ಕ ಹೊಂದಿದೆ. ಸರ್ಕಾರಿ ಸ್ವಾಮ್ಯದ ಬಸ್ ಸೇವೆಯಾದ ಕೆಸ್‌ಆರ್‌ಟಿಸಿ ಬಳಸಿ ಬೆಂಗಳೂರು ಮತ್ತು ಕರ್ನಾಟಕದ ಇತರ ಪ್ರಮುಖ ಪಟ್ಟಣಗಳಿಂದ ವಿಜಯಪುರವನ್ನು ತಲುಪಬಹುದು.