ಬಸಂತ (ವಸಂತ ) ಪಂಚಮಿಯು ಹಿಂದೂ ಹಬ್ಬವಾಗಿದ್ದು, ಇದನ್ನು ಸಾಮಾನ್ಯವಾಗಿ ಫೆಬ್ರವರಿಯ ವಸಂತಕಾಲದಲ್ಲಿ ಆಚರಿಸಲಾಗುತ್ತದೆ. ಈ ಶುಭ ದಿನದಂದು ಜ್ಞಾನ, ಸಂಗೀತ ಮತ್ತು ವಿದ್ಯೆಗೆ ದೇವತೆಯಾಗಿರುವ ಸರಸ್ವತಿ ದೇವಿಯನ್ನು ಪೂಜಿಸಲಾಗುತ್ತದೆ.ಭಾರತದಾದ್ಯಂತ ಈ ದಿನವನ್ನು ಎಲ್ಲಾ ಶಾಲೆಗಳು, ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳು ವಿಜೃಂಭಣೆಯಿಂದ ಆಚರಿಸುತ್ತವೆ. ವಿದ್ಯಾರ್ಥಿಗಳು ಶಿಕ್ಷಣ, ಕಲೆ ಮತ್ತು ಸಂಗೀತದಲ್ಲಿ ಉತ್ತಮ ಸಾಧನೆ ಮಾಡುವುದಕ್ಕಾಗಿ ಸರಸ್ವತಿ ದೇವಿಯನ್ನು ಪ್ರಾರ್ಥಿಸುತ್ತಾರೆ.
ಭಾರತದಾದ್ಯಂತ ವಿವಿಧ ರಾಜ್ಯಗಳಲ್ಲಿ ಈ ಹಬ್ಬವನ್ನು ವಿವಿಧ ರೀತಿಯಲ್ಲಿ ಆಚರಿಸಬಹುದಾದರೂ, ಕೆಲವೊಂದು ಸಾಮಾನ್ಯ ಪದ್ಧತಿಯು ಎಲ್ಲಾ ಕಡೆ ಒಂದೇ ರೀತಿಯಾಗಿರುತ್ತದೆ. ದೇವಿಯು ಹಳದಿ ಬಣ್ಣದ ಉಡುಪನ್ನು ಧರಿಸುವುದರಿಂದ ಮಹಿಳೆಯರು ಸಾಮಾನ್ಯವಾಗಿ ಹಳದಿ ಸೀರೆಯನ್ನು ಧರಿಸಿರುತ್ತಾರೆ. ಈ ಹಬ್ಬದಲ್ಲಿ ಹಳದಿ ಒಂದು ಪ್ರಮುಖ ಬಣ್ಣವಾಗಿದೆ ಏಕೆಂದರೆ, ಬಸಂತ (ವಸಂತ ) ಪಂಚಮಿಯ ಸಮಯದಲ್ಲಿ ಸಾಸಿವೆಯ ಬೆಳೆಯನ್ನು ಹೆಚ್ಚಾಗಿ ಕೊಯ್ಲು ಮಾಡಲಾಗುತ್ತದೆ. ವಿವಿಧ ರೀತಿಯ ಸಿಹಿತಿಂಡಿಗಳನ್ನು ತಯಾರಿಸಲಾಗುತ್ತದೆ ಮತ್ತು ಸರಸ್ವತಿ ದೇವಿಗೆ ಅರ್ಪಿಸಲಾಗುತ್ತದೆ ಮತ್ತು “ಪ್ರಸಾದವನ್ನು” ವಿತರಿಸಲಾಗುತ್ತದೆ.
ಜೀವನದಲ್ಲಿ ಹೊಸತನ್ನು ಪ್ರಾರಂಭಿಸಲು ಬಸಂತ (ವಸಂತ ) ಪಂಚಮಿ ಒಂದು ಶುಭ ದಿನವಾಗಿದೆ. ಈ ದಿನದಂದು ಅನೇಕ ಜನರು “ಗೃಹಪ್ರವೇಶ” ಮಾಡುವ ಮೂಲಕ ಹೊಸ ಮನೆಗೆ ಹೋಗುತ್ತಾರೆ ರೆ, ಹೊಸ ವ್ಯವಹಾರವನ್ನು ಪ್ರಾರಂಭಿಸುತ್ತಾರೆ ಅಥವಾ ಮುಖ್ಯವಾದ ಯೋಜನೆಗಳನ್ನು ಕೈಗೊಳ್ಳುತ್ತಾರೆ. ಈ ಹಬ್ಬವು ಹೆಚ್ಚಾಗಿ ಸಮೃದ್ಧಿ ಮತ್ತು ಅದೃಷ್ಟದ ಸಂಕೇತವಾಗಿದೆ. ಬಸಂತ ಪಂಚಮಿಯೊಂದಿಗೆ, ವಸಂತಕಾಲವು ಪ್ರಾರಂಭವಾಗುತ್ತದೆ, ಬೆಳೆಯನ್ನು ಬೆಳೆಯಲು ಮತ್ತು ಸುಗ್ಗಿಗೆ ಮತ್ತು ಕೊಯ್ಲಿಗೆ ಉತ್ತಮ ಸಮಯ ಎಂದು ನಂಬಲಾಗಿದೆ. ಚಳಿಗಾಲದ ನಂತರ, ಬಸಂತ(ವಸಂತ) ಪಂಚಮಿಯನ್ನು ವಸಂತಕಾಲದ ಮೊದಲ ದಿನವೆಂದು ಪರಿಗಣಿಸಲಾಗುತ್ತದೆ, ಇದು ಸುಗ್ಗಿಯ ಸಮಯ. ಭಾರತವು ಮುಖ್ಯವಾಗಿ ಕೃಷಿ ದೇಶವಾಗಿರುವುದರಿಂದ, ಈ ಹಬ್ಬವು ಭಾರತೀಯರ ಹೃದಯದಲ್ಲಿ ಸಾಕಷ್ಟು ಮಹತ್ವದ ಸ್ಥಾನವನ್ನು ಹೊಂದಿದೆ ಎಂದು ಹೇಳಬಹುದು.
ಕರ್ನಾಟಕದಲ್ಲಿ ಬಸಂತ ಪಂಚಮಿಯು ಸರಸ್ವತಿ ಪೂಜೆಗೆ ಸೀಮಿತವಾಗಿಲ್ಲ. ಉತ್ತಮ ಬೆಳೆಗಳು ಮತ್ತು ಸಮೃದ್ಧ ಸುಗ್ಗಿಯೊಂದಿಗೆ ಆಶೀರ್ವದಿಸಿದ ದೇವರನ್ನು ಮುಖ್ಯವಾಗಿ ಗೌರವಿಸಲು ಕರ್ನಾಟಕದಲ್ಲಿ ಇದನ್ನು ಆಚರಿಸುತ್ತಾರೆ. ವಿಭಿನ್ನ ರುಚಿಕರವಾದ ಆಹಾರಗಳನ್ನು ತಯಾರಿಸಲಾಗುತ್ತದೆ, ಇದರಲ್ಲಿ ಪಾಯಸ ಸಾಮಾನ್ಯವಾದ ಭಕ್ಷ್ಯವಾಗಿದೆ. ಬಸಂತ ಪಂಚಮಿಯನ್ನು ಆಚರಿಸಲು ಇಡೀ ಕುಟುಂಬದವರು ಒಟ್ಟಾಗಿ ಸೇರಿ ಸಂತೋಷದಿಂದ ಆಚರಿಸುತ್ತಾರೆ
ಇದನ್ನು ಮನೆಯಲ್ಲಿ ಮಾತ್ರ ಆಚರಿಸಲಾಗುವುದಿಲ್ಲ, ಎಲ್ಲಾ ಕಲಿಕಾ ಕೇಂದ್ರಗಳಲ್ಲಿ ಈ ಪೂಜೆಯನ್ನು ಮಾಡುತ್ತಾರೆ. ವಿದ್ಯಾರ್ಥಿಗಳು ಮತ್ತು ಇತರರನ್ನು ಆಹ್ವಾನಿಸಿ “ಪ್ರಸಾದ” ವಿತರಿಸಲಾಗುತ್ತದೆ. ಭಾರತದಾದ್ಯಂತ, ಹಿಂದೂಗಳಿಗೆ, ಬಸಂತ ಪಂಚಮಿ ಬೇರೆ ಬೇರೆ ಕಾರಣಗಳಿಗಾಗಿ ಸಾಕಷ್ಟು ಮಹತ್ವದ ದಿನವಾಗಿದೆ. ಕೆಲವರು ಇದನ್ನು ಸರಸ್ವತಿ ದೇವಿಯನ್ನು ಗೌರವಿಸಲು ಆಚರಿಸಿದರೆ, ಮತ್ತೆ ಕೆಲವರು ಸುಗ್ಗಿಯ ಮತ್ತು ವಸಂತಕಾಲದ ಆರಂಭವಾಗಿ ಆಚರಿಸುತ್ತಾರೆ